12 ಅಕ್ಟೋಬರ್ 2014
ವಿಮಾ ಸರಕುಗಳ ನಮೂನೆಗಳು ಯಾವುವು?
ವಿಮಾ ಸರಕುಗಳ ನಮೂನೆಗಳು :-
• ಅವಧಿ ವಿಮೆ ಯೋಜನೆ (Term Insurance Plan) : ನಿಗದಿತ ಅವಧಿಯ ವರೆಗೆ ವಿಮಾರಕ್ಷಣೆ ನೀಡುವ ಯೋಜನೆ. ಈ ಅವಧಿಯೊಳಗೆ ಮರಣ ಸಂಭವಿಸಿದರೆ ಮಾತ್ರ ವಿಮಾ ಪರಿಹಾರ ಸಿಗುವದು. ಇದು ಅಗ್ಗ ದರದ ವಿಮಾ ಪಾಲಸಿಯಾಗಿದೆ.
• ಆಜೀವ ವಿಮೆ ಯೋಜನೆ (Whole Life Plan) : ಸಾಯುವ ವರೆಗೆ ವಿಮಾರಕ್ಷಣೆ ನೀಡುವ ಯೋಜನೆ. ಪಾಲಿಸಿ ಪಡೆದ ನಂತರ ಜೀವಿತ ಅವಧಿಯ ಕೊನೆಗೆ, ಅಂದರೆ ಮರಣ ಸಂಭವಿಸಿದಾಗ ವಿಮಾ ಪರಿಹಾರ ಸಿಗುವದು. ಮರಣಾನಂತರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸುವ ವ್ಯವಸ್ಥೆ ಈ ಪಾಲಿಸಿಯಲ್ಲಿದೆ.
• ಶುದ್ಧ ಎಂಡೋಮೆಂಟ್ ವಿಮೆ ಯೋಜನೆ (Pure Endowment Plan) : ನಿಗದಿತ ಅವಧಿ ಪೂರ್ತಿ ಬದುಕಿದರೆ ಮಾತ್ರ ವಿಮಾ ಪರಿಹಾರ ಸಿಗುವದು. ನಿಗದಿತ ಅವಧಿಯೊಳಗೆ ಮರಣ ಸಂಭವಿಸಿದರೆ ಏನೂ ಸಿಗುವದಿಲ್ಲಾ. ಅವಧಿ ಪೂರ್ತಿ ಬದುಕುವ ಭರವಸೆ, ನೂರಕ್ಕೆ ನೂರರಷ್ಟು ಇದ್ದರೆ ಮಾತ್ರ ಈ ಪಾಲಿಸಿ ತೆಗೆದುಕೊಳ್ಳ ಬೇಕು.
• ಎಂಡೋಮೆಂಟ್ ವಿಮೆ ಯೋಜನೆ (Endowment Plan) : ನಿಗದಿತ ಅವಧಿಯೊಳಗೆ ಮರಣ ಸಂಭವಿಸಿದರೆ ಅಥವಾ ನಿಗದಿತ ಅವಧಿ ಪೂರ್ತಿ ಬದುಕಿದಾಗ ವಿಮಾ ಪರಿಹಾರ ಸಿಗುವದು. ತುಂಬಾ ಜನಪ್ರಿಯ ಯೋಜನೆ. ನಿರ್ಧಿಷ್ಠ ಅವಧಿಯೊಳಗೆ ಬದುಕಿದರೂ ಅಥವಾ ಮರಣ ಹೊಂದಿದರೂ ಪರಿಹಾರ ನಿಶ್ಚಿತ.
• ಹಣ ಮರುಪಾವತಿ ವಿಮೆ (Money Back Plan) : ಇದು ಎಂಡೋಮೆಂಟ ವಿಮೆಯಂತೆಯೇ ಇದೆ. ಆದರೆ ಪಾಲಸಿಯು ಮ್ಯೆಚುರಿಟಿ ಆಗುವದಕ್ಕೆ ಮುಂಚೆ, ಪ್ರತಿ 3/4/5 ವರ್ಷಗಳ ಪ್ರತಿ ಕಾಲಾವಧಿಗಳ ಕೊನೆಗೆ ಬದುಕಿದ್ದರೆ, ವಿಮಾ ಮೊತ್ತದ ಸ್ವಲ್ಪ ಸ್ವಲ್ಪ ಭಾಗವನ್ನು (ಅಂದರೆ ಮೂಲವಿಮಾ ಮೊತ್ತದ 10/15/20/25% ಭಾಗವನ್ನು) ಮುಂಗಡವೆಂದು ನೀಡುತ್ತಾರೆ. ಈ ಮುಂಗಡ ಹಣದ ಕಂತುಗಳಿಗೆ ಜೀವಿತ ಸೌಲಭ್ಯ (Survival Benefit) ಗಳೆಂದು ಕರೆಯುತ್ತಾರೆ.
ಮ್ಯೆಚುರಿಟಿ ಕಾಲಕ್ಕೆ ಕೊಡಬೇಕಾದ ಹಣದಲ್ಲಿ ಮುಂಗಡವೆಂದು ನೀಡಿದ ಜೀವಿತ ಸೌಲಭ್ಯಗಳ ಹಣವನ್ನು ಕಳೆದು ಉಳಿದುದನ್ನು ಕೊಡುತ್ತಾರೆ.
ಒಂದು ವೇಳೆ ಮ್ಯೆಚ್ಯುರಿಟಿಗೆ ಮುಂಚೆಯೇ ಮರಣ ಸಂಭವಿಸಿದರೆ, ಪೂರ್ಣ ವಿಮಾ ಮೊತ್ತವನ್ನು ಗಳಿಸಿದ ಬೋನಸ್ಸುಗಳೊಂದಿಗೆ (ಆ ಮೊದಲು ಮುಂಗಡವೆಂದು ನೀಡಿದ ಜೀವಿತ ಸೌಲಭ್ಯ - (Survival Benefit) ಗಳ ಹಣಗಳನ್ನು ಕಳೆಯದೆಯೇ ನೀಡುತ್ತಾರೆ.
ಜೀವನದ ಮಧ್ಯಂತರ ಅವಧಿಗಳ ಆರ್ಥಿಕ ಬೇಡಿಕೆಗಳನ್ನು ಪೂರೈಸುವ ಜನಪ್ರಿಯ ಪಾಲಿಸಿ ಇದಾಗಿದೆ. ಅವಧಿಗೆ ಮುಂಚೆ ನಿಧನ ಹೊಂದಿದರೆ, ಆ ಮೊದಲು ಪಡೆದ ಜೀವಿತ ಸೌಲಭ್ಯಗಳು ಉಚಿತವಾಗಿ ದೊರೆಯುವ ವ್ಯವಸ್ಥೆ ಈ ಪಾಲಿಸಿಯಲ್ಲಿದೆ.
• ಪರಿವರ್ತಿಸ ಬಹುದಾದ ಅವಧಿ ವಿಮೆ ಯೋಜನೆ (Convertible Term Insurance Plan ) : ಮೂಲತಃ ಇದು ಅವಧಿ ವಿಮೆಯ ಪಾಲಿಸಿಯಾಗಿದ್ದು, ಕೆಲ ನಿರ್ಧಿಷ್ಠ ಅವಧಿಯೊಳಗೆ, ಯಾವಾಗ ಬೇಕಾದರೂ, ಪಾಲಿಸಿಧಾರಕ ಬಯಸಿದರೆ ಅವಧಿ ವಿಮೆಯ ಪಾಲಿಸಿಯನ್ನು ಆಜೀವ ಅಥವಾ ಎಂಡೋಮೆಂಟ್ ಪಾಲಸಿಗೆ ಪರಿವರ್ತಿಸ ಬಹುದು. ಪ್ರಾರಂಭದಲ್ಲಿ ಹೆಚ್ಚು ವಿಮಾಕಂತು ನೀಡಲು ಸಾಮಥ್ಯವಿಲ್ಲದವರಿಗೆ ಇದು ಉತ್ತಮ ಯೋಜನೆಯಾಗಿದೆ.
• ಪರಿವರ್ತಿಸ ಬಹುದಾದ ಆಜೀವ ವಿಮೆ ಯೋಜನೆ (Convertible Whole life Insurance Plan) : ಮೂಲತಃ ಇದು ಆಜೀವ ವಿಮೆಯ ಪಾಲಿಸಿಯಾಗಿದ್ದು, ಕೆಲ ನಿರ್ಧಿಷ್ಠ ಅವಧಿಯ ನಂತರ, ಪಾಲಿಸಿಧಾರಕ ಬಯಸಿದರೆ ಆಜೀವ ವಿಮೆಯ ಪಾಲಿಸಿಯನ್ನು ಎಂಡೋಮೆಂಟ್ ಪಾಲಸಿಗೆ ಪರಿವರ್ತಿಸ ಬಹುದು. ಪ್ರಾರಂಭದಲ್ಲಿ ಹೆಚ್ಚು ವಿಮಾಕಂತು ನೀಡಲು ಸಾಮಥ್ಯವಿಲ್ಲದವರಿಗೆ ಇದು ಉತ್ತಮ ಯೋಜನೆಯಾಗಿದೆ.
• ಸಂಯುಕ್ತ ಜೀವದ ಯೋಜನೆ (Joint Life Insurance Plan ) : ಇದು ಇಬ್ಬರು ವ್ಯಕ್ತಿಗಳು, ವಿಶೇಷವಾಗಿ ದಂಪತಿಗಳು ಪಡೆಯಬಹದಾದ ಎಂಡೋಮೆಂಟ ತರಹದ ಪಾಲಿಸಿಯಾಗಿರುತ್ತದೆ. ಇಬ್ಬರೂ ಅವಧಿ ಪೂರ್ತಿ ಬದುಕಿದರೆ ಮೂಲ ವಿಮಾಮೊತ್ತವನ್ನು ಬೋನಸ್ ಜೊತೆ ನೀಡಲಾಗುತ್ತದೆ.
ಅವಧಿಗೆ ಮುಂಚೆ ಒಬ್ಬನು ನಿಧನನಾದರೆ, ಉಳಿದವನಿಗೆ ಕೂಡಲೇ ಮೂಲ ವಿಮಾರಾಶಿಯನ್ನು ನೀಡಲಾಗುವದು. ಆದರೆ ಪಾಲಿಸಿಯು ಉಳಿದವನ ಸಲುವಾಗಿ, ವಿಮಾ ಕಂತು ನೀಡದೆಯೇ ಮುಂದುವರೆಯುವದು.
ಇನ್ನೊಂದು ವಿಮಾ ಮೊತ್ತವನ್ನು (ಗಳಿಕೆಯ ಬೋನಸ್‍ನೊಂದಿಗೆ) ಉಳಿದವನಿಗೆ ಅವಧಿಮಗಿದ ಕೂಡಲೇ, ಅಥವಾ ಅದಕ್ಕೂ ಮೊದಲೇ ಆತ ನಿಧನನಾದರೆ, ನಿಧನ ಸಮಯಕ್ಕೆ ನೀಡಲಾಗುವದು.
ಗಳಿಸುವ ದಂಪತಿಗಳು ಅವಶ್ಯವಾಗಿ ಪಡೆಯಲೇ ಬೇಕಾದ ಪಾಲಿಸಿ ಇದಾಗಿದೆ.
• ಮಕ್ಕಳ ವಿಮೆ ಯೋಜನೆ (Children’s Insurance Plan) : ಅಪ್ರಾಪ್ತ ವಯಸ್ಕ ಮಗುವಿನÀ ಸಲುವಾಗಿ/ಪರವಾಗಿ; ತಂದೆ/ತಾಯಿ/ಪೊಷಕರು, ಆ ಮಗುವಿನ ಜೀವದಮೇಲೆ ತೆಗೆದುಕೊಳ್ಳಬಹುದಾದ ಪಾಲಸಿ. ಮಗು ವಯಸ್ಕನಾದ ಮೇಲೆ ಪಾಲಸಿಯ ಮಾಲೀಕತ್ವವನ್ನು ಪಡೆದು, ಅದನ್ನು ಮುಂದುವರೆಸುವ ಹೊಣೆಗಾರಿಕೆಯನ್ನೂ ಪಡೆಯುತ್ತಾನೆ. ಮಗುವಿನ ವಯಸ್ಸು ತೀರ ಚಿಕ್ಕದಾಗಿದ್ದರೆ, ವಿಮಾ ರಕ್ಷಣೆ ಕೂಡಲೇ ಪ್ರಾರಂಭವಾಗದೇ, ಕೆಲ ಅವಧಿಯ ನಂತರ ಪ್ರಾರಂಭವಾಗುವದು. ಈ ಅವಧಿಯಲ್ಲಿ ಮಗು ನಿಧನ ಹೊಂದಿದರೆ, ನೀಡಿದ ವಿಮಾಕಂತುಗಳನ್ನು ಮಾತ್ರ ಮರಳಿಸಲಾಗುವದು. . ಈ ಅವಧಿಯ ನಂತರ ನಿಧನ ಹೊಂದಿದರೆ, ಆ ಸಮಯದಲ್ಲಿ ಯಾರು ಪಾಲಿಸಿಯ ಮಾಲೀಕನಾಗಿರುತ್ತಾರೋ, ಅವನಿಗೆ ವಿಮಾಮೊತ್ತವನ್ನು ನೀಡಲಾಗುವದು. ಅವಧಿ ಪೂರ್ತಿ ಮಗು ಬದುಕಿದರೆ, ಮಗುವಿಗೆ ಮ್ಯಾಚುರಿಟಿ ಹಣವನ್ನು ನೀಡಲಗುವದು.
ಮಗು ಪಾಲಿಸಿಯ ಮಾಲಿಕನಾಗುವ ಮುಂಚೆ, ಪಾಲಿಸಿ ಖರೀದಿಸಿದವನು ನಿಧನ ಹೊಂದಿದರೆ, ನಂತರ ಅಂದರೆ ಮಗು ಪಾಲಿಸಿಯ ಮಾಲಿಕನಾಗುವತನಕ ವಿಮಾ ಕಂತು ಮನ್ನಾಗೊಳ್ಳುವ ಸೌಲಭ್ಯವನ್ನೂ ಬೇಕೆಂದರೆ ಈ ಪಾಲಸಿಯಲ್ಲಿ ಖರೀದಿಸಬಹುದು.
ಮಕ್ಕಳಿಗೆ ನೀಡಬಹದಾದ ಅತ್ಯುತ್ತಮ ಕಾಣಿಕೆ.
• ವರ್ಷಾಶನ ವಿಮೆ ಯೋಜನೆ (Annuity Insurance Plan): ನಿಗದಿತ ದಿನಾಂಕಿನಿಂದ ಆಜೀವ ಆದಾಯ ನಿಯಮಿತವಾಗಿ ಸಂದಾಯವಾಗುವದು. ವೃದ್ಧಾವಸ್ಥೆಯಲ್ಲಿ ಆರ್ಥಿಕ ಸ್ವಾತಂತ್ರ್ಯ ನೀಡುವ ಉತ್ಕøಷ್ಠ ಯೋಜನೆ ಇದಾಗಿದೆ. ವಿವಿಧ ನಮೂನೆಗಳ ನಿವೃತ್ತಿ ಆದಾಯಗಳನ್ನು ಆಯ್ಕೆ ಮಡಿಕೊಳ್ಳಬಹುದು.
ನಿವೃತ್ತಿ ಆದಾಯವನ್ನು ತಕ್ಷಣದಿಂದಲೇ, ಅಥವಾ ಕೆಲ ಅವಧಿಯ ನಂತರದಿಂದ ಪಡೆಯುವ ಸ್ವಾತಂತ್ರ್ಯ ಗ್ರಾಹಕನಿಗೆ ಲಭ್ಯವಿದೆ.
• ಯುನಿಟ್ ಜೋಡಣೆಯ ವಿಮೆ ಯೋಜನೆ (Unit Linked Insurance Plan - ULIP ). ಈ ಪಾಲಿಸಿಯಲ್ಲಿ ನೀಡಲಾಗುವ ಒಟ್ಟು ವಿಮಾಕಂತಿನಿಂದ
ಸ್ವಲ್ಪ ಹಣವನ್ನು ಗ್ರಾಹಕನು ಆಯ್ಕೆ ಮಾಡಿಕೊಂಡ ಅವಧಿ/ ಅಪಘಾತ/ ಗಂಭೀರಕಾಯಿಲೆಯ ವಿಮೆಗಳ ಸೌಲಭ್ಯಗಳಿಗೆ ಉಪಯೋಗಿಸಲಾಗುವದು. ಅದರ ಜೊತೆಗೇ ಇನ್ನೂ ಸ್ವಲ್ಪ ಹಣವನ್ನು ಆಡಳಿತ/ಅಲೋಕೇಶನ್ ಶುಲ್ಕಗಳಿಗಾಗಿ ಉಪಯೋಗಿಸಲಾಗುವದು.
ನಂತರ ಉಳಿದ ವಿಮಾಕಂತಿನ ಹಣವನ್ನು ವಿಮಾ ಪಾಲಿಸಿಧಾರಕನಿಗಾಗಿ ಅವನು ಆಯ್ಕೆ ಮಾಡಿಕೊಂಡ ರೀತಿಯಲ್ಲಿ ಮುಕ್ತಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಹೂಡಿಕೆಗಾಗಿ ಪಾಲಸಿಧಾರಕನಿಗೆ ಮ್ಯೂಚ್ಯೂವಲ್ ಫಂಡಿನ ಹೂಡಿಕೆಯ ರೀತಿಯಲ್ಲಿ ಯುನಿಟ್‍ಗಳನ್ನು ಹಂಚಲಾಗುತ್ತದೆ. ಪಾಲಿಸಿಧಾರಕನ ಇಚ್ಛೆಯಂತೆಯೇ ಹೂಡಿಕೆಯ ಆಯ್ಕೆಯಾಗುವದರಿಂದ ಪಾಲಿಸಿಯ ಪ್ರತಿಫಲಕ್ಕೆ ಪಾಲಸಿಧಾರಕನೇ ಸಂಪೂರ್ಣವಾಗಿ ಹೊಣೆಗಾರನಾಗುತ್ತಾನೆ.
ಮೆಚ್ಯೂರಿಟಿಯ ಕಾಲಕ್ಕೆ ಹಂಚಿಕೆಯಾದ ಯುನಿಟ್‍ಗಳಿಂದ ಬೆಳೆದ ನಿಧಿಯ ಪೂರ್ಣ ಹಣವನ್ನು ನೀಡಲಾಗುತ್ತದೆ.
ಅವಧಿಗೆ ಮುಂಚೆಯೇ ಮರಣ ಸಂಭವಿಸಿದರೆ, ಆ ಸಮಯದಲ್ಲಿ 1)ನಿಧಿಯಲ್ಲಿಯ ಬೆಳೆದ ಹಣ ಆಥವಾ 2)ಮೂಲವಿಮಾಮೊತ್ತದ ಹಣ ಇವೆರಡವುಗಳಲ್ಲಿ ಯಾವುದು ದೊಡ್ಡದಿರುತ್ತದೆಯೋ ಅದನ್ನು ಪಾಲಸಿಧಾರಕನ ವಾರಸುದಾರನಿಗೆ ನೀಡಲಾಗುವದು. (ಕೆಲವು ಪಾಲಸಿಗಳಲ್ಲಿ ಇವೆರಡೂ ಹಣಗಳನ್ನು ನೀಡುವ ವ್ಯವಸ್ಥೆಯೂ ಇರುತ್ತದೆ.)
ತನ್ನ ಉಳಿತಾಯದ ಹೂಡಿಕೆಯ ಸ್ವಾತಂತ್ರ್ಯ ಬಯಸುವವನಿಗೆ, ಹೂಡಿಕೆಯ ಅಪಾಯ ಎದುರಿಸು ಧೈರ್ಯವಿದ್ದವನಿಗೆ ಈ ಪಾಲಿಸಿಯು ಅಚ್ಚು ಮೆಚ್ಚಿನದಾಗಿದೆ. ಹೂಡಿಕೆಯ ಮರುಕಟ್ಟ್ಟೆಯಲ್ಲಿ ಉಂಟಾಗುವ ಏರಿಳಿತಗಳಿಂದ ಬಚಾವಾಗಲು, ಹೂಡಿಕೆಯ ಆಯ್ಕೆಗಳನ್ನು ಮನಬಂದಂತೆ ಬದಲಾಯಿಸುವ ಸ್ವಾತಂತ್ರ್ಯವೂ ಈ ಪಾಲಿಸಿಯಲ್ಲಿ ಲಭ್ಯವಿದೆ. ಮೆಚ್ಯೂರಿಟಿಯ ಹಣವನ್ನು ಭವಿಷ್ಯದ ಕಂತುಗಳಲ್ಲಿ ಪಡೆಯುವ ಸೌಲಭ್ಯವೂ ಇದೆ.