Saturday, May 31, 2014

31ಮೇ 2014

ವಿಮಾ ಆಸಕ್ತಿ(insurable interest) ಎಂದರೆ :

ಉತ್ತರ: ವಿಮೆಯ ಅವಶ್ಯಕತೆ ಇದ್ದರೆ ಮಾತ್ರ ವಿಮಾಬಯಸುವವನು (ವಿಮಾಭಿಲಾಷಿ - proposer ಅಥವಾ ವಿಮಾರಕ್ಷಿತ–life assured)ವಿಮೆ ಖರೀದಿಸಬಹುದು. ಅದಿಲ್ಲದಿದ್ದರೆ ಅವನಿಗೆ ವಿಮೆ ಖರೀದಿಸುವ ಅರ್ಹತೆಯೇ ದೊರಕುವದಿಲ್ಲಾ. ವಿಮೆಯ ಖರೀದಿಯ ಅಪ್ಪಟ ಅವಶ್ಯಕತೆಗೇ ವಿಮಾ ಆಸಕ್ತಿ ಎಂದು ಕರೆಯಬಹುದು.

Friday, May 30, 2014

30ಮೇ 2014

ವಿಮಾ ಕರಾರು ಬೇರೆ ಕರಾರಿಗಿಂತ ಹೇಗೆ ಭಿನ್ನವಾಗಿದೆ? 

ವಿಮಾ ಕರಾರಿನಲ್ಲಿ ಸಾಮಾನ್ಯ ಕರಾರಿನಲ್ಲಿರಬೇಕಾದ ಎಲ್ಲಾ ಅಂಶಗಳು ಇರಲೇಬೇಕು. ಅದರಜೊತೆಗೇ ಇನ್ನೆರಡು ಸಂಗತಿಗಳ ಉಪಸ್ಥಿತಿಯನ್ನು ಬಯಸುತ್ತದೆ. ಅವು ಯಾವುವು ಅಂದರೆ,

1) ವಿಮಾ ಆಸಕ್ತಿ, (Insurable Interest) .2)ಸಂಪೂರ್ಣ ನಂಬಿಕೆ ಪ್ರದರ್ಶನ.( Utmost Good Faith)

Thursday, May 29, 2014

29ಮೇ 2014

ವಿಮಾ ಕರಾರಿನಲ್ಲಿ ಏಜೆಂಟನ ಪಾತ್ರ :


 ವಿಮೆಯನ್ನು ಮಾರಾಟ ಮಾಡಲು ವಿಮಾಕಂಪನಿಯು ಏಜೆಂಟರನ್ನು ಕಮೀಶನ್ ಆಧಾರದ ಮೇಲೆ ನಿಯಮಿಸುತ್ತದೆ. ಆದರೆ ವಿಮಾನಿಯಂತ್ರಕನ (ಆಯ್.ಆರ್.ಡಿ.ಎ.) ಆದೇಶಗಳ ಪ್ರಕಾರ, ವಿಮಾ ಮಾರಾಟದಲ್ಲಿ ಕಂಪನಿ ಹಾಗೂ ಗ್ರಾಹಕ ಇವರಿಬ್ಬರ ಹಿತಾಸಕ್ತಿಗಳನ್ನು ಕಾಪಾಡುವದು ವಿಮಾ ಏಜೆಂಟನ ಕರ್ತವ್ಯವಾಗಿರುತ್ತದೆ. ವಿಮಾ ಕರಾರು ನೆರವೇರಿಕೆಯಲ್ಲಿ ಏಜೆಂಟನು ಪ್ರತ್ಯಕ್ಷವಾಗಿ ಭಾಗಿಯಾಗದಿದ್ದರೂ, ಗ್ರಾಹಕ ಹಾಗೂ ಕಂಪನಿ, ಇವರಿಬ್ಬರಿಗೂ ಅವಶ್ಯಕವೆನಿಸುವ ಭೌತಿಕ ಮಾಹಿತಿಗಳನ್ನು ನೀಡಿ ಕರಾರು ನೆರವೇರಿಕೆಯಲ್ಲಿ ನೇರ ಸಾಕ್ಷಿಯಾಗುತ್ತಾನೆ. ಕರಾರು ನೆರವೇರಿಕೆಗೆ ಏಜೆಂಟನ ಉಪಸ್ಥಿತಿ ಕಡ್ಡಾಯವಾಗಿದೆ.

Wednesday, May 28, 2014

28ಮೇ 2014

ಪಾಲಸಿ ಬಾಂಡು (policy bond)ಕಳೆದು ಹೋದರೆ, ಹಾಳಾದರೆ ವಿಮಾ ಕರಾರಿಗೆ ಏನಾಗುತ್ತದೆ? 


ಕರಾರು ಲಿಖಿತರೂಪದಲ್ಲಿಯೇ ಇರಬೇಕೆಂಬ ನಿಯಮ ಇಲ್ಲದಿರುವದರಿಂದ,ಪಾಲಸಿ ಬಾಂಡು ಕಳೆದು ಹೋದರೆ ವಿಮಾ ಕರಾರಿಗೆ ಯಾವ ಧಕ್ಕೆ ಉಂಟಾಗುವದಿಲ್ಲಾ. ಪಾಲಸಿ ಬಾಂಡ್‍ವೇ ಕರಾರು ಅಲ್ಲಾ. ಅದು ಕರಾರಿನ ಸಾಕ್ಷಿ ಮಾತ್ರವಾಗಿದೆ.  ಪಾಲಸಿ ಬಾಂಡು ಕಳೆದು ಹೋದರೆ ಅದು ಇಲ್ಲದೆಯೇ ವಿಮಾ ಪರಿಹಾರ ಪಡೆಯುವ ವ್ಯವಸ್ಥೆ ಇದೆ.

ಆದರೆ ಪಾಲಸಿಯ ಮೇಲೆ ಸಾಲ, ಜೀವಿತ ಸೌಲಭ್ಯ ಪಡೆಯ ಬೇಕಾದರೆ ಮೂಲ ಪಾಲಿಸಿ ಬಾಂಡ್ ಇಲ್ಲವೇ ಡುಪ್ಲಿಕೇಟ್ ಪಾಲಿಸಿ ಬಾಂಡ್ ನೀಡಲೇ ಬೇಕಾಗುತ್ತದೆ. ಪಾಲಸಿ ಬಾಂಡು ಕಳೆದು ಹೋದರೆ, ವಿಮಾ ಸಂಸ್ಥೆಯು ತನ್ನ ನಿಯಮಗಳ ಪ್ರಕಾರ ಡುಪ್ಲಿಕೇಟ್ ಪಾಲಿಸಿ ಬಾಂಡ್ ನೀಡುತ್ತದೆ.

Tuesday, May 27, 2014

27ಮೇ 2014

ಪಾಲಿಸಿ ಬಾಂಡಿನ ಪಾತ್ರ :


ಕರಾರು ಲಿಖಿತರೂಪದಲ್ಲಿಯೇ ಇರಬೇಕೆಂಬ ನಿಯಮವೇನಿಲ್ಲ. ಆದರೂ ಉಭಯ ಪಕ್ಷಗಳ ಅನಕೂಲಕ್ಕೆ  ವಿಮಾ ಕರಾರಿನ ವಿವರಗಳನ್ನು ಲಿಖಿತರೂಪದಲ್ಲಿ ದಾಖಲಿಸುತ್ತಾರೆ. ಹೀಗೆ ತಯಾರಾದ  ದಾಖಲೆಗೆ ಪಾಲಿಸಿ ಬಾಂಡ್ (policy bond)ಎಂದು ಕರೆಯುತ್ತಾರೆ.
(ಲಿಖಿತ ರೂಪದ ಪಾಲಿಸಿ ಬಾಂಡು ಹಾಳಾದರೆ ಕರಾರು ಹಾಳಾಗುವದಿಲ್ಲ. ಡುಪ್ಲಿಕೇಟ್ ಪಾಲಿಸಿಬಾಂಡ್ ಪಡೆಯಬಹುದು.)

Monday, May 26, 2014

26ಮೇ 2014

ಕರಾರು ಜಾರಿಗೆ ತರಲು ಉಭಯ ಪಕ್ಷಗಳು ಪಡೆದಿರ ಬೇಕಾದ ಆರ್ಥಿಕ ಯೋಗ್ಯತೆ (capability of  performance) ಎಂದರೆ :


ಒಪ್ಪಂದ ನೆರವೇರಿಕೆಗೆ ಅವಶ್ಯಕತೆಯಾದ ಆರ್ಥಿಕ ಯೋಗ್ಯತೆ(capability of  performance) ಉಭಯ ಪಕ್ಷಗಳಿಗೆ ಇರದೇ ಇದ್ದರೆ, ಕರಾರು ಅನುಷ್ಠಾನಗೊಳ್ಳುವದು ಕಠಿಣವಾಗುತ್ತದೆ. ಹೀಗಾಗಿ ಕರಾರಿನಲ್ಲಿ ಉಭಯ ಪಕ್ಷಗಳಿಗೆ ಆರ್ಥಿಕ ಯೋಗ್ಯತೆಅತ್ಯವಶ್ಯವಾಗಿದೆ.(ವಿಮೆಯು ಇಡೀ ಅವಧಿಯುದ್ದಕ್ಕೂ ಮುಂದುವರೆಸುವ ಕರಾರು ಆಗಿರುವದರಿಂದ, ಇಡೀ ಅವಧಿಯುದ್ದಕ್ಕೂ ಉಭಯ ಪಕ್ಷಗಳು ಆರ್ಥಿಕ ಯೋಗ್ಯತೆ ಹೊಂದಿರುವದು ಅತ್ಯವಶ್ಯವಾಗಿದೆ).ಕರಾರಿನ ಯಶಸ್ಸಿಗೆ; ಕಂತು ನೀಡಲು ವಿಮಾಕೋರಿಕೆದಾರನಿಗೆ, ವಿಮಾ ಪರಿಹಾರ ನೀಡಲು ವಿಮಾ ಸಂಸ್ಥೆಗೆ, ಆರ್ಥಿಕ ಯೋಗ್ಯತೆ ವಿಮಾ ಅವಧಿಯ ಕೊನೆಯವರೆಗೂ ಇರುವದು ಅತ್ಯವಶ್ಯವಾಗಿದೆ.

Sunday, May 25, 2014

25ಮೇ 2014

ಕರಾರಿನಲ್ಲಿ ಕಾನೂನು ಬದ್ಧ ಉದ್ಯೇಶ(legality of object or purpose) ಎಂದರೆ :


ಕರಾರಿನಲ್ಲಿ ಉದ್ಯೇಶ ಕಾನೂನಿಗೆ ವ್ಯತಿರಿಕ್ತವಾಗಿರಕೂಡದು. ಹಾಗಿದ್ದರೆ ಕರಾರು ಅನೂರ್ಜಿತವಗುತ್ತದೆ.

Saturday, May 24, 2014

 24ಮೇ 2014


ಕರಾರಿನಲ್ಲಿ ಸಮಾನ ಮನಸ್ಕತೆ (of the same mind : consensus - ad idem)  ಎಂದರೆ :


ಕರಾರಿನಲ್ಲಿ ಉಭಯ ಪಕ್ಷಗಳು ಒಂದೇ ರೀತಿಯಲ್ಲಿ ಯೋಚಿಸಿ, ಒಪ್ಪಂದದ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದರೆ ಇಬ್ಬರೂ ಸಮಾನ ಮನಸ್ಕರಾಗಿದ್ದಾರೆ ಎಂದು ಭಾವಿಸಲಾಗುವದು.

Friday, May 23, 2014

23ಮೇ 2014

ಕರಾರು ಅರ್ಹತೆ (capacity to contract)  ಎಂದರೆ :


ಕರಾರಿನಲ್ಲಿ ಭಾಗವಹಿಸಲು ಉಭಯ ಪಕ್ಷಗಳಿಗೂ ಕಾನೂನಿನ ಅರ್ಹತೆ ಇರಬೇಕಾಗುತ್ತದೆ. ಆಗ ಮಾತ್ರ ಒಪ್ಪಂದ ಉರ್ಜಿತವಾಗುತ್ತದೆ. ಉಭಯ ಪಕ್ಷಗಳಿಗೂ ಇರಬೇಕಾದ ಕಾನೂನಿನ ಅರ್ಹತೆ ಎಂದರೆ, ಕರಾರಿನಲ್ಲಿ ಭಾಗವಹಿಸುವವನು 
1) ವಯಸ್ಕನಾಗಿರಬೇಕು. 
2)ದೃಢ ಮನಸ್ಕನವನಾಗಿರಬೇಕು.
3) ಮಾನಸಿಕ ವಿಕಲನಾಗಿರಬಾರದು. 
4) ಕಾನೂನಿನ ಪ್ರತಿಬಂಧಕ್ಕೆ ಒಳಗಾಗಿರಬಾರದು.

Thursday, May 22, 2014

22ಮೇ 2014


ದಾಕ್ಷಿಣ್ಯ (consideration)ಎಂದರೆ :



ಕರಾರು ನೆರವೇರಿಕೆಗಾಗಿ ಯೋಗ್ಯಬೆಲೆ ತೆರಬೇಕಾಗುತ್ತದೆ. ಹೀಗೆ ತೆರಬೇಕಾದ ಯೋಗ್ಯಬೆಲೆಗೆ    ದಾಕ್ಷಿಣ್ಯವೆಂದು ಕರೆಯುತ್ತಾರೆ. ವಿಮಾ ಕರಾರಿನಲ್ಲಿ ಕೋರಿಕೆದಾರನಿಗೆ ವಿಮಾಕಂತು ದಾಕ್ಷಿಣ್ಯವೆನಿಸಿದರೆ,    ವಿಮಾಮೊತ್ತ  ಒಪ್ಪಿಗೆದಾರನಿಗೆ ದಾಕ್ಷಿಣ್ಯವೆನಿಸುತ್ತದೆ.

Wednesday, May 21, 2014

21ಮೇ 2014

ಒಪ್ಪಂದ (agreement)  ಎಂದರೆ :

ಒಬ್ಬನು ಮಾಡಿಕೊಂಡ ವಿನಂತಿಯನ್ನು ಮತ್ತೊಬ್ಬನು ಮನ್ನಿಸಿದಾಗ ಒಪ್ಪಂದ ಉಂಟಾಗುತ್ತದೆ. ವಿನಂತಿದಾರನಿಗೆ ಕೋರಿಕೆದಾರನೆಂದೂ, ವಿನಂತಿಯನ್ನು ಮನ್ನಿಸಿದವನಿಗೆ ಒಪ್ಪಿಗೆದಾರನೆಂದು ಕರೆಯುತ್ತಾರೆ.

Tuesday, May 20, 2014

20 ಮೇ 2014

ವಿಧಿಯುಕ್ತ ಕರಾರಿನಲ್ಲಿ (valid contract) ಇರಬೇಕಾದ ಸಂಗತಿಗಳು :


ವಿಧಿಯುಕ್ತ ಕರಾರಿನಲ್ಲಿ ಕೆಳಗಿನ ಸಂಗತಿಗಳು ಇರಬೇಕು.

1) ಒಪ್ಪಂದ.(agreement)                             :  ಕೋರಿಕೆ ಹಾಗೂ ಒಪ್ಪಿಗೆ ಎರಡೂ ಇರಬೇಕು.
2) ಯೋಗ್ಯ ಬೆಲೆ.(consideration)                 :  ಒಪ್ಪಿಗೆದಾರ ಯೋಗ್ಯ ಬೆಲೆ ಕೇಳಬೇಕು, ಕೋರಿಕೆದಾರ ಯೋಗ್ಯ ಬೆಲೆ
                                                                       ನೀಡಬೇಕು.
3) ಅರ್ಹತೆ.(capacity to contract)               :  ಕೋರಿಕೆದಾರನಿಗೆ ಹಾಗೂ ಒಪ್ಪಿಗೆದಾರನಿಗೆ ಒಪ್ಪಂದ ನೆರವೇರಿಸಲು
                                                                       ಅರ್ಹತೆಇರಬೇಕು.
4) ಸಮಾನ ಮನಸ್ಕತೆ.(of the same mind)     : ಕೋರಿಕೆದಾರ ಹಾಗೂ ಒಪ್ಪಿಗೆದಾರ ಇಬ್ಬರೂ ಒಂದೇ ರೀತಿಯಲ್ಲಿ
                                                                      ಯೋಚಿಸಬೇಕು.
5) ಉದ್ಯೇಶದಕಾನೂನು ಬದ್ಧತೆ                      : ಕರಾರಿನ ಉದ್ಯೇಶ  ಕಾನೂನಿಗೆ ವಿರುದ್ಧವಾಗಿರಕೂಡದು.
       (legality of object or purpose)

 6) ಆರ್ಥಿಕ ಯೋಗ್ಯತೆ.                                :  ಒಪ್ಪಂದ ನೆರವೇರಿಸಲು ಅಗತ್ಯವಾದ ಆರ್ಥಿಕ ಯೋಗ್ಯತೆ              
                                                                     ಕೋರಿಕೆದಾರ (capability of  performance)ಹಾಗೂಒಪ್ಪಿಗೆದಾರ
                                                                     ಇಬ್ಬರಿಗೂ ಇರಬೇಕು)

Monday, May 19, 2014

 19ಮೇ 2014

ಕರಾರು(contract) ಹಾಗೂ ವಿಮಾ ಕರಾರು(Insurance contract) ಎಂದರೇನು?


ಕರಾರು(contract) : ಕಾನೂನು ಬದ್ಧ ಉದ್ಯೇಶ ನೆರವೇರಿಸಲು, ಒಮ್ಮನಿಸ್ಸಿನ ಹಾಗೂ ದಾಕ್ಷಿಣ್ಯ(consideration) ದ ಆಧಾರದ ಮೇಲೆ;ಕಾನೂನು ಬದ್ಧ ಅರ್ಹತೆ ಹಾಗೂ ಆರ್ಥಿಕ ಯೋಗ್ಯತೆ ಹೊಂದಿದವರ ನಡುವೆ ಜರುಗಿದ ಒಪ್ಪಂದಕ್ಕೆ ಕರಾರು ಎನ್ನುತ್ತಾರೆ.


ವಿಮಾ ಕರಾರು(Insurance contract): ಅನೀರಿಕ್ಷಿತ ಅಪಾಯದ ಘಟನೆ ಸಂಭವಿಸಿದಾಗ, ಉಂಟಾಗಬಹುದಾದ ಆರ್ಥಿಕ ಹಾನಿಯನ್ನು ತುಂಬಿಕೊಡಲು, ವಿಮಾ ಕೋರಿಕೆದಾರನ ಪ್ರಸ್ತಾಪಕ್ಕೆ, ವಿಮಾ ಕಂತನ್ನು ಪಡೆದ ಮೇಲೆ ವಿಮಾ ಪ್ರದಾನಕನು ಒಪ್ಪಿಕೊಳ್ಳುತ್ತಾನೆ. ಈ ರೀತಿಯ ಒಪ್ಪಂದ ಕಾನೂನಿನ ಅನ್ವಯ ನಡೆಯುವದರಿಂದ, ವಿಮೆಯನ್ನು ಒಂದು ರೀತಿಯಲ್ಲಿ, ಕರಾರು ಎಂದೇ ಕರೆಯಲಾಗುತ್ತದೆ

Sunday, May 18, 2014

18ಮೇ 2014

ಮಹಾ ಸಂಖ್ಯೆಗಳ  ನಿಯಮ (Law of Large Numbers) :


ಒಂದೇ ನಮೂನೆಯ ವಿಪತ್ತುಗಳನ್ನು ಒಟ್ಟುಗೂಡಿಸಿ ಸರಾಸರಿ ಆಧಾರದ ಮೇಲೆ  ವಿಮಾ ದರವನ್ನು ನಿರ್ಧರಿಸುತ್ತಾರೆ. ಹೀಗೇ ಒಟ್ಟುಗೂಡಿಸಲಾಗುವ ವಿಪತ್ತುಗಳ ಸಂಖ್ಯೆ ಎಷ್ಟು ಪ್ರಮಾಣದಲ್ಲಿ ದೊಡ್ಡದಾಗುತ್ತ ಹೋಗುತ್ತದೆಯೋ  ಅದೇ ಪ್ರಮಾಣದಲ್ಲಿ ವಿಮಾದರವೂ ನಿಖರವಾಗಿ ನಿರ್ಧಾರವಾಗುತ್ತ ಹೋಗುತ್ತದೆ. ಇದಕ್ಕೆ ಸಂಖ್ಯಾಶಾಸ್ತ್ರದಲ್ಲಿ ಮಹಾ ಸಂಖ್ಯೆಗಳ ನಿಯಮವೆನ್ನುತ್ತಾರೆ.

Saturday, May 17, 2014

 17ಮೇ 2014


ವಿಮಾ ಸಂಸ್ಥೆಯು ಅನೇಕ ವಿಪತ್ತುಗಳನ್ನು ಒಟ್ಟುಗೂಡಿಸು(Pooling of Risks)ವಾಗ ವಹಿಸುವ ಜಾಗ್ರತೆಗಳು. :



 ಅಸಂಖ್ಯಾತ ಗ್ರಾಹಕರಿಂದ ವರ್ಗಾವಣೆಗೊಂಡ ಎಲ್ಲಾ ರೀತಿಯ/ಮಟ್ಟಗಳ ವಿಪತ್ತುುಗಳನ್ನು ವಿಮಾಸಂಸ್ಥೆಯು, ಒಂದೇಕಡೆ ಒಟ್ಟುಗೂಡಿಸಿ, ಬೆಲೆಯನ್ನು ನಿರ್ಧರಿಸುವಾಗ ಈ ಎಲ್ಲಾ ವಿಪತ್ತುಗಳಿಗೆ ವಿಮೆಯ ಬೆಲೆಯನ್ನು ಒಂದೇ ದರದಲ್ಲಿ ನಿರ್ಧರಿಸುವದಿಲ್ಲಾ. ಇದರಿಂದ ಸಣ್ಣ ಗಾತ್ರದ ಅಪಾಯ ವರ್ಗಾಯಿಸಿದ ಗ್ರಾಹಕರಿಗೆ ಅನ್ಯಾಯವಾಗುತ್ತದೆ. ಇದನ್ನು ತಪ್ಪಿಸಲು  ವಿಮಾಸಂಸ್ಥೆಯು, ಒಂದೊಂದೇ ರೀತಿಯ/ಮಟ್ಟದ ವಿಪತ್ತು (  homogeneous risks ) ಗಳನ್ನು ಒಂದೆಡೆ ಒಟ್ಟುಗೂಡಿಸಿ ವಿಮೆಯ ಬೆಲೆಯನ್ನು ನಿರ್ಧರಿಸುತ್ತದೆ. ಹೀಗಾಗಿ ಪ್ರತಿಯೊಂದು ರೀತಿಯ/ವಿಪತ್ತಿನ ಮಟ್ಟಕ್ಕೆ ಪ್ರತ್ಯೇಕವಾಗಿ ಯೋಗ್ಯ ಬೆಲೆಯ ನಿರ್ಧಾರವಾಗುವದರಿಂದ ಯಾರಿಗೂ ಅನ್ಯಾಯವಾಗುವದಿಲ್ಲಾ.

ಉದಾ :1) ಕಾರುಗಳ, ಮನೆಗಳ, ಪ್ರಯಾಣಿಕರ, ಮನುಷ್ಯ ಜೀವಗಳ ಅಪಾಯಗಳನ್ನು ಪ್ರತ್ಯೇಕವಾಗಿಯೇ ಒಟ್ಟುಗೂಡಿಸಿ ಪ್ರತಿಯೊಂದು ರೀತಿಯ ವಿಪತ್ತುುಗಳಿಗೆ ಪ್ರತ್ಯೇಕವಾಗಿಯೇ ವಿಮಾ ದರವನ್ನು ನಿರ್ಧರಿಸುತ್ತಾರೆ. 2) ಅದೇ ರೀತಿ ಒಂದೇ ರೀತಿಯ ಜೀವವಿಮೆಯಲ್ಲಿಕೂಡಾ, ಸಮಾನ ಅವಧಿಯ ವಿಮಾಕಂತಿನ ದರ 20, 21 ವರ್ಷದ ಗುಂಪಿನ ಗ್ರಾಹಕರಿಗೆ ಬೇರೆ ಬೇರೆಯೇ ಆಗಿರುತ್ತದೆ. 

Friday, May 16, 2014

 16ಮೇ 2014

ವಿಪತ್ತಿನ ವರ್ಗಾವಣೆ (Risk Transfer) ಯಿಂದ ಅಂದರೆ ವಿಮೆಯಿಂದ ದೊರೆಯುವ ಪ್ರಯೋಜನಗಳು :


ಅಪಾಯದಿಂದ ರಕ್ಷಿಸಿಕೊಳ್ಳಲು, ಅಪಾಯವನ್ನು ವಿಮಾಸಂಸ್ಥೆಗೆ ವರ್ಗಾಯಿಸಲು ಗ್ರಾಹಕನಿಗೆ ಸ್ವಲ್ಪ ಬೆಲೆ ಮಾತ್ರ  ನೀಡ ಬೇಕಾಗುವದರಿಂದ ಗ್ರಾಹಕನು ಚಿಂತಾಮುಕ್ತನಾಗುತ್ತಾನೆ, ಮನಃಶಾಂತಿಯನ್ನು ಪಡೆಯುತ್ತಾನೆ.      
   

Thursday, May 15, 2014

15ಮೇ 2014

ವಿಮೆಯ ರಕ್ಷಣೆ ಪಡೆಯಬಹುದಾದ ವಿಪತ್ತು (ಆಪತ್ತು)ಗಳು (Insurable Risks)  : 

1)ಆರ್ಥಿಕ ವಿಪತ್ತು(Financial Risk)ಗಳಿಗೆ,
2)ಶುದ್ಧ ವಿಪತ್ತು(Pure Risk)ಗಳಿಗೆ,
3)ನಿರ್ಧಿಷ್ಠ ವಿಪತ್ತು(Pಚಿಡಿಣiಛಿuಟಚಿಡಿ ಖisಞ)ಗಳಿಗೆ ವಿಮಾ ರಕ್ಷಣೆ ದೊರಕುತ್ತದೆ.

 1) ಆರ್ಥಿಕ ವಿಪತ್ತು  :
ಆರ್ಥಿಕ ವಿಪತ್ತು(Financial Risk)ದಿಂದ ಹಾನಿ ಉಂಟಾದಾಗ ಹಾನಿಯ ಪ್ರಮಾಣವನ್ನು ಹಣದಲ್ಲಿ ಲೆಕ್ಕ ಮಾಡಿ ಹೇಳಬಹುದು.
 ಉದಾ : 1)ಕಾರು ಕಳವಾದರೆ ಉಂಟಾಗುವ ಹಾನಿಗೆ ವಿಮಾ ಪಾಲಿಸಿಯಿಂದ ಸಿಗುವ ಪರಿಹಾರ 5 ಲಕ್ಷ ರೂ.ಗಳು.
             2) ವಿಮಾ ಗ್ರಾಹಕನೊಬ್ಬ ನಿಧನನಾದರೆ ಸಿಗುವ ಪರಿಹಾರ 10 ಲಕ್ಷ ರೂಪಾಯಿಗಳು. 
             3)ವಿಮಾ ಗ್ರಾಹಕನೊಬ್ಬ ಅಪಘಾತಕ್ಕೆ ಬಲಯಾದರೆ ಸಿಗುವ ಪರಿಹಾರ 15ಲಕ್ಷ ರೂಪಾಯಿಗಳು.  
             4) ಗ್ರಾಹಕನೊಬ್ಬ 50 ವರ್ಷಕ್ಕೂ ಮಿಕ್ಕಿ ಬದುಕಿದರೆ ಅವನ ಆಜೀವ ಪರ್ಯಂತ ಪಡೆಯುವ ವರ್ಷಾಶನ 120000   ರೂ.ಗಳು.

2)ಶುದ್ಧ ವಿಪತ್ತು (Pure Risk) :
ಶುದ್ಧ ಅಪಾಯಗಳಲ್ಲಿ ಹಾನಿಯನ್ನು ಮಾತ್ರ ನಿರೀಕ್ಷಿಸಬಹುದು. ಕಿಂಚಿತ್ತೂ ಲಾಭವನ್ನು ನಿರೀಕ್ಷಿಸಕೂಡದು..
ಉದಾ ; 5 ಲಕ್ಷ ರೂ ಕಾರು ಕಳವು ಆದಾಗ, 2 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದರೆ ಸಿಗುವ  ಪರಿಹಾರ 2 ಲಕ್ಷ ರೂ. ಮಾತ್ರ. ಅದೇ ಕಾರಿಗೆ 8 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದರೆ ಸಿಗುವ ಪರಿಹಾರ 5ಲಕ್ಷ ರೂ. ಮಾತ್ರ. ಮೊದಲನೆಯ ಪಾಲಿಸಿಯಲ್ಲಿ ಅಪಾಯದಿಂದ ಹಾನಿಯನ್ನು ನಿರೀಕ್ಷಿಸಬಹುದಾದರೆ, ಎರಡನೆÉಯ ಪಾಲಿಸಿಯಲ್ಲಿ ಅಪಾಯದಿಂದ ಲಾಭವನ್ನು ನಿರಿಕ್ಷಿಸಲೇ ಕೂಡದು.

3) ನಿರ್ಧಿಷ್ಠ ಅಪಾಯ (Particular Risk) :
ಇಲ್ಲಿ ಅಪಾಯವನ್ನು ಸಾರ್ವತ್ರಿಕವಾಗಿ ಪರಿಗಣಿಸದೆ, ನಿರ್ಧಿಷ್ಠ ವ್ಯಕ್ತಿಗೆ ಅಥವಾ ಸ್ಥಾನೀಯ ಘಟನೆಗಳಿಗೆ
ಮಾತ್ರ ಪರಿಗಣಿಸುತ್ತಾರೆ.
ಉದಾ : ಲತಾ ಮಂಗೇಶ್ಕರಳ ಧ್ವನಿಗೆ, ಕೋಲ್ಕತ್ತಾ ಮೈದಾನದ ಕ್ರಿಕೆಟ್‍ಗೆ ಜರುಗ ಬಹುದಾದ ಅಪಾಯ.

Wednesday, May 14, 2014

14ಮೇ 2014

ವಿಮೆಯ ದೃಷ್ಟಿಯಲ್ಲಿ ಅಪಾಯ(Hazard)ಗಳ ನಮೂನೆಗಳು : 


ಎರಡು ಬಗೆಯ ಅಪಾಯಗಳಿವೆ.
 1) ಭೌತಿಕ ಅಪಾಯ(Physical Hazard).2) ನೈತಿಕ ಅಪಾಯ (Moral  Hazard).

1)ಭೌತಿಕ ಅಪಾಯ(Physical Hazard). ಕಣ್ಣಿಗೆ ಕಾಣುವಂತಹವು :
ಉದಾ : ಹಿರಿಯ ವಯಸ್ಸು, ಅಪಾಯಕಾರಿ ಉದ್ಯೋಗ, ಮಹಿಳಾ ಜೀವಿಗಳು, ಕೆಟ್ಟ ಚಟಗಳು, ಅಪಾಯಕರೀ ಹವ್ಯಾಸಗಳು,ಅನಾರೋಗ್ಯಕರ ವಾಸಸ್ಥಾನ,ದೈಹಿಕ ಏರು ಪೇರು, ಅನಾರೋಗ್ಯ,ಅಂಗವಿಕಲತೆ, ಕೌಟುಂಬಿಕ ಅನಾರೋಗ್ಯದ ಹಿನ್ನೆಲೆ, ವ್ಯಕ್ತಿಗತ ಅನಾರೋಗ್ಯದ ಇತಿಹಾಸ.

2)ನೈತಿಕ ಅಪಾಯ (Moral  Hazard). ಕಣ್ಣಿಗೆ ಕಾಣದವುಗಳು.
ಉದಾ : ಕುಡಿತ/ಜೂಜು ಮನೊಭಾವ , ಅಲಕ್ಷ್ಯತನ, ಸ್ವಾರ್ಥಭಾವ, ಲಾಭಕೋರತನ, ದುರಾಶೆ, ವಂಚನೆ, ಅನೈತಿಕ ವಿಚಾರಧಾರೆ,ಇತ್ಯಾದಿ.

Tuesday, May 13, 2014

13ಮೇ 2014

ವಿಪತ್ತಿನ (ಆಪತ್ತಿನ)ವಿವಿಧ ಆಯಾಮಗಳು :


1) ವಿಪತ್ತಿನ (ಆಪತ್ತಿನ)ಅನಿಶ್ಚಿತತೆ (Uncertainity of Risk),
2) ವಿಪತ್ತಿನ (ಆಪತ್ತಿನ) ಮಟ್ಟ (Level of Risk),
3) ವಿಪತ್ತಿನ (ಆಪತ್ತಿನ) ಹುಟ್ಟು (Peril) ಹಾಗೂ ಅಪಾಯ ವರ್ಧಕ (Hazard ).


1) ವಿಪತ್ತಿನ (ಆಪತ್ತಿನ)ಅನಿಶ್ಚಿತತೆ (Uncertainity of Risk) ಎಂದರೆ :-
ವಿಪತ್ತು ಸಂಭವಿಸಬಹುದು ಇಲ್ಲವೇ ಸಂಭವಿಸದೇ ಇರಬಹುದು. ವಿಪತ್ತು ಸಂಭವಿಸುವಂತಿದ್ದರೆ ಮಾತ್ರ ವಿಮೆ ನೀಡಲಾಗುವದು.
ಉದಾ : ಓಡದ ಕಾರಿಗೆ, ಗಳಿಸದ ಮನುಷ್ಯನಿಗೆ ಆರ್ಥಿಕ ಹಾನಿಯ ಅಪಾಯ ಇಲ್ಲವೇ ಇಲ್ಲ. ಅಂತಹ ಸಂದರ್ಭಗಳಲ್ಲಿ ವಿಮೆಯ ಅವಶ್ಯಕತೆ ಇಲ್ಲಾ.

2) ವಿಪತ್ತಿನ (ಆಪತ್ತಿನ) ಮಟ್ಟ (Level of Risk), ಎಂದರೆ :-
ವಿಪತ್ತಿನ ಮಟ್ಟವನ್ನು ಎರಡು ರೀತಿಗಳಲ್ಲಿ ಲೆಕ್ಕ ಹಾಕಲಾಗುತ್ತದೆ.

i) ವಿಪತ್ತಿನ (ಆಪತ್ತಿನ)ಸಂಭ್ಯಾತೆಯ ಪ್ರಮಾಣ. 
ಉದಾ : ಕಾರು ಒಂದು ವರ್ಷದಲ್ಲಿ ಎಷ್ಟು ಬಾರಿ ಅಪಾಯಕ್ಕೆ ಒಳಗಾಗ ಬಹುದು?

ii)  ವಿಪತ್ತಿನ (ಆಪತ್ತಿನ)ಹಾನಿ ಪ್ರಮಾಣ ; 
ಹಾನಿ ಸಂಭವಿಸಿದರೆ ಉಂಟಾಗಬಹುದಾದ ಹಾನಿ ಪ್ರಮಾಣ ಲೆಕ್ಕ ಹಾಕಲಾಗುತ್ತದೆ.  ಉದಾ ; 1 ಲಕ್ಷ ರೂ. ವೇತನದ ಅಧಿಕಾರಿಗೆ ನೀಡಬಹುದಾದ ವಿಮೆಯ ಪ್ರಮಾಣ, 10 ಸಾವಿರ ರೂ. ವೇತನದವನಿಗೆ ನೀಡಬಹುದಾದ ವಿಮೆಯ ಪ್ರಮಾಣದ ಹತ್ತು ಪಟ್ಟು ಜಾಸ್ತಿ ಇರುತ್ತದೆ.


3) ವಿಪತ್ತಿನ (ಆಪತ್ತಿನ)ಮೂಲ (Peril) ಹಾಗೂ ಅಪಾಯ (Hazard) ಗಳು ಎಂದರೆ : -
     
i)ವಿಪತ್ತಿನ (ಆಪತ್ತಿನ) ಮೂಲ (Peril) : 
ವಿಪತ್ತಿನ (ಆಪತ್ತಿನ) ಮೂಲ(Hazard)ಹುಟ್ಟು, ಮೂಲ ಕಾರಣ ಯಾವುದೆಂದು ತಿಳಿದುಕೊಳ್ಳುವಅವಶ್ಯಕತೆ ಇದೆ.
ಉದಾ - ಅಪಾಯ ಹುಟ್ಟುವದು : ಬೆಂಕಿಯಲ್ಲಿ, ಅನಿರೀಕ್ಷಿತ ಸಾವಿನಲ್ಲಿ, ಅಪಘಾತದಲ್ಲಿ.

ii)ಅಪಾಯ (Hazard) : 
ವಿಪತ್ತಿನ ಗಾತ್ರ ಹಾಗೂ ಸಂಭಾವ್ಯತೆಯನ್ನು ಹೆಚ್ಚಿಸುವ ಸಂಗತಿಗಳು ಅಥವಾ ಕಾರಣಗಳಿಗೆ ಅಪಾಯವೆನ್ನುವರು.

ಉದಾ :
ವಿಪತ್ತಿನ ಮೂಲಗಳು (Peril) -   ಅಪಾಯಗಳು  (Hazard)
1) ಬೆಂಕಿ ,                                -  ಗಾಳಿ, ಪೆಟ್ರೋಲ್,
2) ಹೃದಯ ಕಾಯಿಲೆಗಳು             - ಧೂಮ ಪಾನ,ಕುಡಿತ, ಅಲಕ್ಷ್ಯ,
3) ಸಾವು,                                   - ಕುಡಿತ, ಅಲಕ್ಷ್ಯ,ಅಪಾಯಕಾರಿ ವೃತ್ತಿಗಳು.
4) ಗಂಭೀರ ಕಾಯಿಲೆ,                  -  ಅನಾರೋಗ್ಯಕರ ವಾತಾವರಣ, ಚಟಗಳು.

Monday, May 12, 2014

12ಮೇ 2014

ವಿಪತ್ತನ್ನು (ಆಪತ್ತನ್ನು) ಜನರು ಎದುರಿಸುವ ವಿಧಾನಗಳು.


1)ವಿಪತ್ತಿನ (ಆಪತ್ತಿನ) ವರ್ಗಾವಣೆ(Risk Transfer)ಮೂಲಕ,
2) ವಿಪತ್ತಿನ (ಆಪತ್ತಿನ) ಉಳಿಸಿಕೊಳ್ಳುವಿಕೆ(Risk Retention)  (ಸಹಿಸುವಿಕೆ)ಯ ಮೂಲಕ.

ವಿಪತ್ತಿನ (ಆಪತ್ತಿನ) ವರ್ಗಾವಣೆ (Risk Transfer): ಕೆಲವರು ಆರ್ಥಿಕ ಹಾನಿಯ ವಿಪತ್ತನ್ನು ಮೈಮೇಲೆ ಎಳೆದುಕೊಳ್ಳದೇ ಉಪಾಯವಾಗಿ ಹಾನಿಯನ್ನು ಬೇರೆಯವರಿಗೆ ವರ್ಗಾಯಿಸುವರು. ಇದಕ್ಕೇ ವಿಮೆ ಎಂದು ಕರೆಯಬಹುದು. ಈ ರೀತಿ ಮಾಡುವವರು ಬುದ್ಧಿವಂತರು ಚಾಣಾಕ್ಷರು.


ವಿಪತ್ತನ್ನು (ಆಪತ್ತನ್ನು) ಉಳಿಸಿಕೊಳ್ಳುವಿಕೆ(Risk Retention)  : ಕೆಲವರು ಆರ್ಥಿಕ ಹಾನಿಯ ಅಪಾಯವನ್ನು ಮೈಮೇಲೆ ಹಾಕಿಕೊಂಡು ಆ ಹಾನಿಯನ್ನು ತಮ್ಮ ಬಳಿ ಉಳಿಸಿಕೊಳ್ಳುತ್ತಾರೆ. ಇದಕ್ಕೆ ವಿಪತ್ತಿನ (ಆಪತ್ತಿನ) ಸಹಿಸಿಕೊಳ್ಳುವಿಕೆ ಎಂದೂ ಕರೆಯಬಹದು. ಈ ರೀತೀ ಮಾಡುವವರು ಭಾವನಾತ್ಮಕರು, ಅಪಾಯದ ಗಂಭೀರತೆಯನ್ನು ಮುಂಚಿತವಾಗಿ ಅರಿಯದ ಮುಗ್ಧರು.

Sunday, May 11, 2014

11ಮೇ 2014

ಮನುಷ್ಯನ ಜೀವಕ್ಕೆ ಒದಗಬಹದಾದ ಆರ್ಥಿಕ ವಿಪತ್ತಿನ ಉಗಮಸ್ಥಾನ ಗಳು :.


ಆರ್ಥಿಕ ಹಾನಿಯ ದೃಷ್ಟಿಯಿಂದ ಮಾನವ ಜೀವಕ್ಕೆ ತಗಲುವ ವಿಪತ್ತಿನ ಮೂಲಗಳು ;           

ಗಳಿಕೆಯ ಅವಧಿಯಲ್ಲಿ :
1) ಸಂಭವಿಸಬಹುದಾದ ಅಕಾಲಿಕ ಸಾವಿನಲ್ಲಿ,
2) ಸಂಭವಿಸಬಹುದಾದ ಅಪಘಾತದಲ್ಲಿ
3) ಸಂಭವಿಸಬಹುದಾದ ಗಂಭೀರಕಾಯಿಲೆಗಳಲ್ಲಿ.

ಗಳಿಕೆಯ ನಂತರದ ಅವಧಿಯಲ್ಲಿ :
1)ಸುದೀರ್ಘ ಕಾಲದ ಬದುಕುವಿಕೆಯಲ್ಲಿ ಗಳಿಕೆಯ ನಿಲುಗಡೆ. (ಆರ್ಥಿಕ ಹೊರೆಯ ಭಾರ ಹೆಚ್ಚಾಗುತ್ತದೆ.)

Saturday, May 10, 2014

10 ಮೇ 2014

ವಿಪತ್ತು ( ಆಪತ್ತು)  : 

ವಿಮೆಯ ದೃಷ್ಟಿಯಲ್ಲಿ.ವಿಪತ್ತಿನಿಂದ (ಆಪತ್ತಿನಿಂದ) ಆರ್ಥಿಕ ಹಾನಿ ಸಂಭವಿಸಬಹುದು. ವಿಮೆಯಲ್ಲಿ ವಿಪತ್ತಿನ   ಪಾತ್ರವನ್ನು ವಿಶ್ಲೇಷಿಸುವಾಗ ಗಮನಿಸ ಬೇಕಾದ ಮೂರು ಸಂಗತಿಗಳು.

1) ವಿಪತ್ತಿನ ಸಂಭಾವ್ಯತೆ (Probability of Risk )(ಸಾಧ್ಯತೆ) ;
ವಿಪತ್ತು ಸಂಭವಿಸಬಹುದು, ಸಂಭವಿಸದೇ ಇರಬಹುದು. ಉದಾ : ವಿಮೆಗಾಗಿ 20 ವರ್ಷದ ಪಾಲಸಿ ನೀಡಿದಾಗ, ವಿಮಾರಕ್ಷಿತನು ಈ ಅವಧಿಯಲ್ಲಿ ಮರಣಹೊಂದಬಹುದು ಅಥವಾ ಮರಣಹೊಂದದೇ ಇರಬಹುದು.

2) ವಿಪತ್ತಿನಗಾತ್ರ (size  of  Risk ):    
ಅಳೆಯಲು ಬರುವಂತಹ ವಿಪತ್ತಿಗೆ ಮಾತ್ರ ವಿಮೆ ನೀಡುತ್ತಾರೆ. ತೀರ ಕ್ಷುಲ್ಲಕ/ಅತೀ ಮಹಾನ್ ಗಾತ್ರದ ವಿಪತ್ತಿಗೆ, ವಿಮೆ ನೀಡುವದು ವ್ಯಾವಹಾರಿಕವಾಗಿ ಸಾಧ್ಯವಿಲ್ಲಾ.

ಉದಾ : ನೆಗಡಿಯಂತಹ ಕ್ಷುಲ್ಲಕ ಕಾಯಿಲೆಯೊಂದಕ್ಕೆ ವಿಮೆಯ ರಕ್ಷಣೆ ದೊರಕದು. ಬಿರುಗಾಳಿ, ಯುದ್ಧ ಮುಂತಾದ ಭಾರೀ ವಿಪತ್ತುಗಳಿಗೆ  ವಿಮೆ ಸೌಲಭ್ಯ  ದೊರಕದು.

3) ವಿಪತ್ತಿನ ಉಗಮ ಸ್ಥಾನ  (Origion of Risk ); ವಿಪತ್ತಿನಿಂದ ಹಾನಿ ಸಂಭವಿಸಿದಾಗ ವಿಪತ್ತಿಗೆ ಕಾರಣವಾದ ಉಗಮ ಸ್ಥಾನವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವರು.

ಉದಾ : ಬಾವಿಯಲ್ಲಿ ಮುಳುಗಿ ಮರಣಿಸಿದಾಗ ವಿಪತ್ತಿನ ಉಗಮ ಅಪಘಾತವೋ ಅಥವಾ ಆತ್ಮಹತ್ತೆಯೋ ಎನ್ನುವದನ್ನು ಪತ್ತೆ ಹಚ್ಚುವದು ಮಹತ್ವವಾಗುತ್ತದೆ. ಮರಣ ಕಾರಣ ಆತ್ಮಹತ್ಯೆಯಾಗಿದ್ದರೆ ಅಪಘಾತ  ಪರಿಹಾರ ದೊರಕುವದಿಲ್ಲ. 

Friday, May 9, 2014

9 ಮೇ 2014 


ವಿಮಾ ಮಾರಾಟ ಮಾಡುವಾಗ ಏಜೆಂಟನು ನಿರ್ವಹಿಸ ಬೇಕಾದ ಕರ್ತವ್ಯಗಳು :  


           
ವಿಮಾ ಮಾರಾಟ ಮಾಡುವದಕ್ಕೆ ಏಜೆಂಟನು ನಿರ್ವಹಿಸಬೇಕಾದ ಕರ್ತವ್ಯಗಳು ಏನೆಂದರೆ,     
4) ಆಯ್.ಆರ್.ಡಿ.ಏ ಯಿಂದ ಲೈಸೆನ್ಸ್ ಪಡೆಯುವದು.
5) ವಿಮಾ ಕಂಪನಿಗಳಿಂದ ನೇಮಕಗೊಂಡ ಮೇಲೆ, ವಿಮಾ ಪಾಲಿಸಿಗಳನ್ನು ಮಾರುವಾಗ ಗ್ರಾಹಕ ಹಾಗೂ ವಿಮಾ ಸಂಸ್ಥೆ ಇವರಿಬ್ಬರ ಹಿತಾಸಕ್ತಿಗಳನ್ನು ಕಾಪಾಡಬೇಕು.
6) ಆಯ್.ಆರ್.ಡಿ.ಏ ಯ ಸದಾಚಾರ ಸಂಹಿತೆಯನ್ನು ಪ್ರಾಮಾಣಿಕವಾಗಿ ಪಾಲಿಸಬೇಕು.

Thursday, May 8, 2014

8 ಮೇ 2014 


ವಿಮಾ ಏಜೆಂಟನ ಪಾತ್ರ :            


 ವಿಮಾ ಕಂಪನಿಯಿಂದ ನೇಮಕಗೊಂಡ ಏಜೆಂಟನು ಗ್ರಾಹಕ ಹಾಗೂ ವಿಮಾಸಂಸ್ಥೆಗಳೆರಡನ್ನೂ   ಪ್ರತಿನಿಧಿಸುತ್ತಾನೆ. ಇವರಿಬ್ಬರ ಹಿತಾಸಕ್ತಿಗಳನ್ನು ಕಾಪಾಡುವದು ವಿಮಾ ಏಜೆಂಟನ ಕರ್ತವ್ಯವಾಗಿರುತ್ತದೆ.

1. ಗ್ರಾಹಕನ ಅವಶ್ಯಕತೆಗೆ ಅನುಸಾರವಾಗಿ ವಿಮಾ ಸರಕುಗಳನ್ನು ಶಿಫಾರಸು ಮಾಡುವದು.
2. ವಿಮಾ ಸಂಸ್ಥೆಗೆ ಗ್ರಾಹಕನ ಬಗ್ಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪ್ರಾಮಾಣಿಕವಾಗಿ ನೀಡುವದು.   
3. ವಿಮಾ ಪಾಲಿಸಿ ಹಕ್ಕುದಾರನು ವಿಮಾ ಕೋರಿಕೆ ಸಲ್ಲಿಸಿದಾಗ, ಹಕ್ಕುದಾರನಿಗೆ ಹಣ ಸಿಗುವಂತೆ ಸಹಾಯ     ಮಾಡುವದು.

Wednesday, May 7, 2014

7 ಮೇ 2014 

ಸಾಮಾನ್ಯ ವಿಮಾ(General  Insurance) ಪಾಲಿಸಿಗಳ ವಿವಿಧ ನಮೂನೆಗಳು.

         
1) ಬೆಂಕಿ ವಿಮೆ.  (Fire  Insurance)
2) ಹಡಗು ವಿಮೆ. (Marine  Insurance)
3) ಇನ್ನಿತರ ವಿಮೆ. (Miscellaneous  Insurance)
 (ಉದಾ : ಮೋಟಾರ ವಿಮೆ, ಆಸ್ತಿ ವಿಮೆ, ಹೊರೆ ವಿಮೆ, ಆರೋಗ್ಯ ವಿಮೆ, ಪ್ರಯಾಣ ವಿಮೆ.)

Tuesday, May 6, 2014

6 ಮೇ 2014 


ಜೀವ ವಿಮಾ ಪಾಲಿಸಿಗಳ ವಿವಿಧ ನಮೂನೆಗಳು.



1. ಅವಧಿ ವಿಮೆ(Term Insurance )ಯೋಜನೆ : ನಿಗದಿತ ಅವಧಿಯ ವರೆಗೆ ವಿಮಾರಕ್ಷಣೆ ನೀಡುವ ಯೋಜನೆ. ಈ ಅವಧಿಯೊಳಗೆ ಮರಣ ಸಂಭವಿಸಿದರೆ ಮಾತ್ರ ವಿಮಾ ಪರಿಹಾರ ಸಿಗುವದು.

2. ಆಜೀವ ವಿಮೆ(Whole Life Insurance )ಯೋಜನೆ : ಸಾಯುವ ವರೆಗೆ ವಿಮಾರಕ್ಷಣೆ ನೀಡುವ ಯೋಜನೆ. ಪಾಲಿಸಿ ಪಡೆದ ನಂತರ ಜೀವಿತ ಅವಧಿಯ ಕೊನೆಗೆ, ಅಂದರೆ ಮರಣ ಸಂಭವಿಸಿದಾಗ, ವಿಮಾ ಪರಿಹಾರ ಸಿಗುವದು. 

3. ಶುದ್ಧ ಎಂಡೋಮೆಂಟ್ ವಿಮೆ (Pure Endowment Insurance ) ಯೋಜನೆ : ನಿಗದಿತ ಅವಧಿ ಪೂರ್ತಿ ಬದುಕಿದರೆ ಮಾತ್ರ ವಿಮಾ ಪರಿಹಾರ ಸಿಗುವದು. ನಿಗದಿತ ಅವಧಿಯೊಳಗೆ ಮರಣ ಸಂಭವಿಸಿದರೆ ಏನೂ ಸಿಗುವದಿಲ್ಲಾ.  
   
4. ಎಂಡೋಮೆಂಟ್ ವಿಮೆ (Endowment Insurance) ಯೋಜನೆ : ನಿಗದಿತ ಅವಧಿಯೊಳಗೆ ಮರಣ ಸಂಭವಿಸಿದರೆ ಅಥವಾ ನಿಗದಿತ ಅವಧಿ ಪೂರ್ತಿ ಬದುಕಿದಾಗ ವಿಮಾ ಪರಿಹಾರ ಸಿಗುವದು.

5. ಹಣ ಮರುಪಾವತಿ ವಿಮೆ(Money Back Insurance )  : ಇದು ಎಂಡೋಮೆಂಟ ವಿಮೆಯಂತೆಯೇ ಇದೆ. ಆದರೆ ಪಾಲಸಿಯು ಮ್ಯೆಚುರಿಟಿ ಆಗುವದಕ್ಕೆ ಮುಂಚೆ, ಪ್ರತಿ 3/4/5 ವರ್ಷಗಳ ಪ್ರತಿ ಕಾಲಾವಧಿಗಳ ಕೊನೆಗೆ ಬದುಕಿದ್ದರೆ, ವಿಮಾ ಮೊತ್ತದ ಸ್ವಲ್ಪ ಸ್ವಲ್ಪ ಭಾಗವನ್ನು (ಅಂದರೆ ಮೂಲವಿಮಾ ಮೊತ್ತದ 10/15/20/25% ಭಾಗವನ್ನು) ಮುಂಗಡವೆಂದು ನೀಡುತ್ತಾರೆ. ಈ ಮುಂಗಡ ಹಣದ ಕಂತುಗಳಿಗೆ ಜೀವಿತ ಸೌಲಭ್ಯಗಳೆಂದು ಕರೆಯುತ್ತಾರೆ.

a.ಮ್ಯೆಚುರಿಟಿ ಕಾಲಕ್ಕೆ ಕೊಡಬೇಕಾದ ಹಣದಲ್ಲಿ ಮುಂಗಡವೆಂದು ನೀಡಿದ ಜೀವಿತ ಸೌಲಭ್ಯಗಳ ಹಣವನ್ನು ಕಳೆದು ಉಳಿದುದನ್ನು ಕೊಡುತ್ತಾರೆ.

b.ಒಂದು ವೇಳೆ ಮ್ಯೆಚ್ಯುರಿಟಿಗೆ ಮುಂಚೆಯೇ ಮರಣ ಸಂಭವಿಸಿದರೆ, ಪೂರ್ಣ ವಿಮಾ ಮೊತ್ತವನ್ನು ಗಳಿಸಿದ ಬೋನಸ್ಸುಗಳೊಂದಿಗೆ (ಆ ಮೊದಲು ಮುಂಗಡವೆಂದು ನೀಡಿದ ಜೀವಿತ ಸೌಲಭ್ಯಗಳ ಹಣಗಳನ್ನು ಕಳೆಯದೆಯೇ) ನೀಡುತ್ತಾರೆ. 

6. ಪರಿವರ್ತಿಸ ಬಹುದಾದ ಅವಧಿ ವಿಮೆ(Convertible Term  Insurance ) ಯೋಜನೆ : ಮೂಲತಃ ಇದು ಅವಧಿ ವಿಮೆಯ ಪಾಲಿಸಿಯಾಗಿದ್ದು, ಕೆಲ ನಿರ್ಧಿಷ್ಠ ಅವಧಿಯೊಳಗೆ, ಯಾವಾಗ ಬೇಕಾದರೂ, ಪಾಲಿಸಿಧಾರಕ ಬಯಸಿದರೆ ಅವಧಿ ವಿಮೆಯ ಪಾಲಿಸಿಯನ್ನು ಆಜೀವ ಅಥವಾ ಎಂಡೋಮೆಂಟ್ ಪಾಲಸಿಗೆ ಪರಿವರ್ತಿಸ ಬಹುದು. 

7. ಪರಿವರ್ತಿಸ ಬಹುದಾದ ಆಜೀವ ವಿಮೆ (Convertible Whole Life  Insurance ) ಯೋಜನೆ : ಮೂಲತಃ ಇದು ಆಜೀವ ವಿಮೆಯ ಪಾಲಿಸಿಯಾಗಿದ್ದು, ಕೆಲ ನಿರ್ಧಿಷ್ಠ ಅವಧಿಯ ನಂತರ, ಪಾಲಿಸಿಧಾರಕ ಬಯಸಿದರೆ ಆಜೀವ ವಿಮೆಯ ಪಾಲಿಸಿಯನ್ನು ಎಂಡೋಮೆಂಟ್ ಪಾಲಸಿಗೆ ಪರಿವರ್ತಿಸ ಬಹುದು. 

8. ಸಂಯುಕ್ತ ಜೀವದ ಯೋಜನೆ (Joint Life  Insurance ): ಇದು ಇಬ್ಬರು ವ್ಯಕ್ತಿಗಳು, ವಿಶೇಷವಾಗಿ ದಂಪತಿಗಳು ಪಡೆಯಬಹದಾದ ಎಂಡೋಮೆಂಟ ತರಹದ ಪಾಲಿಸಿಯಾಗಿರುತ್ತದೆ. ಇಬ್ಬರೂ ಅವಧಿ ಪೂರ್ತಿ ಬದುಕಿದರೆ ಮೂಲ ವಿಮಾಮೊತ್ತವನ್ನು ಬೋನಸ್ ಜೊತೆ ನೀಡಲಾಗುತ್ತದೆ. 

a.ಅವಧಿಗೆ ಮುಂಚೆ ಒಬ್ಬನು ನಿಧನನಾದರೆ, ಉಳಿದವನಿಗೆ ಕೂಡಲೇ ಮೂಲ ವಿಮಾರಾಶಿಯನ್ನು ನೀಡಲಾಗುವದು. ಆದರೆ ಪಾಲಿಸಿಯು ಉಳಿದವನ ಸಲುವಾಗಿ, ವಿಮಾ ಕಂತು ಪಡೆಯದೆÉಯೇ ವಿಮಾ ರಕ್ಷೆಯನ್ನು ಮುಂದುವರೆಸುವದು.

b.ಇನ್ನೊಂದು ವಿಮಾ ಮೊತ್ತವನ್ನು (ಗಳಿಕೆಯ ಬೋನಸ್‍ನೊಂದಿಗೆ) ಉಳಿದವನಿಗೆ ಅವಧಿಮಗಿದ ಕೂಡಲೇ, ಅಥವಾ ಅದಕ್ಕೂ ಮೊದಲೇ ಆತ ನಿಧನನಾದರೆ, ನಿಧನ ಸಮಯಕ್ಕೆ ನೀಡಲಾಗುವದು.

9. ಮಕ್ಕಳ ವಿಮೆ (Children Insurance ) ಯೋಜನೆ : ಅಪ್ರಾಪ್ತ ವಯಸ್ಕ ಮಗುವಿನÀ ಸಲುವಾಗಿ/ಪರವಾಗಿ; ತಂದೆ/ತಾಯಿ/ಪೊಷಕರು, ಆ ಮಗುವಿನ ಜೀವದಮೇಲೆ ತೆಗೆದುಕೊಳ್ಳಬಹುದಾದ ಪಾಲಸಿ. ಮಗು ವಯಸ್ಕನಾದ ಮೇಲೆ ಪಾಲಸಿಯ ಮಾಲೀಕತ್ವವನ್ನು ಪಡೆದು, ಅದನ್ನು ಮುಂದುವರೆಸುವ ಹೊಣೆಗಾರಿಕೆಯನ್ನೂ ಪಡೆಯುತ್ತಾನೆ. ಮಗುವಿನ ವಯಸ್ಸು ತೀರ ಚಿಕ್ಕದಾಗಿದ್ದರೆ, ವಿಮಾ ರಕ್ಷಣೆ ಕೂಡಲೇ ಪ್ರಾರಂಭವಾಗದೇ, ಕೆಲ ಅವಧಿಯ ನಂತರ ಪ್ರಾರಂಭವಾಗುವದು. ಈ ಅವಧಿಯಲ್ಲಿ ಮಗು ನಿಧನ ಹೊಂದಿದರೆ, ನೀಡಿದ ವಿಮಾಕಂತುಗಳನ್ನು ಮಾತ್ರ ಮರಳಿಸಲಾಗುವದು. . ಈ ಅವಧಿಯ ನಂತರ ನಿಧನ ಹೊಂದಿದರೆ, ಆ ಸಮಯದಲ್ಲಿ ಯಾರು ಪಾಲಿಸಿಯ ಮಾಲೀಕನಾಗಿರುತ್ತಾರೋ, ಅವನಿಗೆ ವಿಮಾಮೊತ್ತವನ್ನು ನೀಡಲಾಗುವದು. ಅವಧಿ ಪೂರ್ತಿ ಮಗು ಬದುಕಿದರೆ, ಮಗುವಿಗೆ ಮ್ಯಾಚುರಿಟಿ ಹಣವನ್ನು ನೀಡಲಗುವದು. 

10. ವರ್ಷಾಶನ ವಿಮೆ (Annuity  Insurance) ಯೋಜನೆ : ನಿಗದಿತ ದಿನಾಂಕಿನಿಂದ ಆಜೀವ ಆದಾಯ ನಿಯಮಿತವಾಗಿ ಸಂದಾಯವಾಗುವದು.

11. ಯುನಿಟ್ ಜೋಡಣೆಯ ವಿಮೆ ಯೋಜನೆ(Unit Linked  Insurance Plan - ULIP ). ಈ ಪಾಲಿಸಿಯಲ್ಲಿ ನೀಡಲಾಗುವ ಒಟ್ಟು ವಿಮಾಕಂತಿನಿಂದ 

ಸ್ವಲ್ಪ ಹಣವನ್ನು ಗ್ರಾಹಕನು ಆಯ್ಕೆ ಮಾಡಿಕೊಂಡ ಅವಧಿ/ ಅಪಘಾತ/ ಗಂಭೀರಕಾಯಿಲೆಯ ವಿಮೆಗಳ ಸೌಲಭ್ಯಗಳಿಗೆ ಉಪಯೋಗಿಸಲಾಗುವದು. ಅದರ ಜೊತೆಗೇ ಇನ್ನೂ ಸ್ವಲ್ಪ ಹಣವನ್ನು ಆಡಳಿತ/ಅಲೋಕೇಶನ್ ಶುಲ್ಕ (Administration/Allocation Fees ) ಗಳಿಗಾಗಿ ಉಪಯೋಗಿಸಲಾಗುವದು. 

ನಂತರ ಉಳಿದ ವಿಮಾಕಂತಿನ ಹಣವನ್ನು ವಿಮಾ ಪಾಲಿಸಿಧಾರಕನಿಗಾಗಿ ಅವನು ಆಯ್ಕೆ ಮಾಡಿಕೊಂಡ ರೀತಿಯಲ್ಲಿ ಮುಕ್ತಮಾರುಕಟ್ಟೆಯಲ್ಲಿ ಹೂಡಿಕೆ (Investment)  ಮಾಡಲಾಗುತ್ತದೆ.  ಈ ಹೂಡಿಕೆಗಾಗಿ ಪಾಲಸಿಧಾರಕನಿಗೆ ಮ್ಯೂಚ್ಯೂವಲ್ ಫಂಡಿನ ಹೂಡಿಕೆಯ ರೀತಿಯಲ್ಲಿ ಯುನಿಟ್‍ಗಳನ್ನು ಹಂಚಲಾಗುತ್ತದೆ. ಪಾಲಿಸಿಧಾರಕನ ಇಚ್ಛೆಯಂತೆಯೇ ಹೂಡಿಕೆಯ ಆಯ್ಕೆಯಾಗುವದರಿಂದ ಪಾಲಿಸಿಯ ಪ್ರತಿಫಲಕ್ಕೆ ಪಾಲಸಿಧಾರಕನೇ ಸಂಪೂರ್ಣವಾಗಿ ಹೊಣೆಗಾರನಾಗುತ್ತಾನೆ.

ಮೆಚ್ಯೂರಿಟಿಯ ಕಾಲಕ್ಕೆ ಹಂಚಿಕೆಯಾದ ಯುನಿಟ್‍ಗಳಿಂದ ಬೆಳೆದ ನಿಧಿಯ ಪೂರ್ಣ ಹಣವನ್ನು ನೀಡಲಾಗುತ್ತದೆ. 

ಅವಧಿಗೆ ಮುಂಚೆಯೇ ಮರಣ ಸಂಭವಿಸಿದರೆ, ಆ ಸಮಯದಲ್ಲಿ, 
1)ನಿಧಿಯಲ್ಲಿಯ ಬೆಳೆದ ಹಣ   ಆಥವಾ 
2)ಮೂಲವಿಮಾಮೊತ್ತದ ಹಣ 
ಇವೆರಡವುಗಳಲ್ಲಿ ಯಾವುದು ದೊಡ್ಡದಿರುತ್ತದೆಯೋ ಅದನ್ನು ಪಾಲಸಿಧಾರಕನ ವಾರಸುದಾರನಿಗೆ ನೀಡಲಾಗುವದು. (ಕೆಲವು ಪಾಲಸಿಗಳಲ್ಲಿ ಇವೆರಡೂ ಹಣಗಳನ್ನು ನೀಡುವ ವ್ಯವಸ್ಥೆಯೂ ಇರುತ್ತದೆ.)

Monday, May 5, 2014

5 ಮೇ 2014 


ವಿಮಾ ಹಂಚಿಕೆ ((Insurance Distribution ) ಯ ವಿಧಾನಗಳು : 


  
 1) ನೇರ ಮಾರಾಟದ (Direct Marketing) ವ್ಯವಸ್ಥೆ: ಆನ್ ಲೈನ ಮೂಲಕ ವಿಮಾ ಮಾರಾಟ.
  2) ಮಧ್ಯವರ್ತಿಗಳ ಮೂಲಕ ಮಾರಾಟದ (Non Direct Marketing)  ವ್ಯವಸ್ಥೆÀ : ಏಜೆಂಟರು, ಕಾರ್ಪೋರೇಟ್  
        ಏಜೆಂಟರು, ದಲ್ಲಾಳಿಗಳು, ಪುನರ್ವಿಮೆ. 

Sunday, May 4, 2014

4 ಮೇ 2014 


ವಿಮಾ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಬಗೆಯ ವೃತ್ತಿದಾರರು.



1. ಏಜೆಂಟ (Agent)   – ವಿಮಾ ಸಂಸ್ಥೆಯ ಪರವಾಗಿ, ಕಮೀಶನ್ ಆಧಾರದ ಮೇಲೆ ವಿಮಾಸರಕುಗಳನ್ನು ಗ್ರಾಹಕರಿಗೆ ಮಾರುವ ವ್ಯಕ್ತಿಗಳು.
2. ಕಾರ್ಪೋರೇಟ್ ಏಜೆಂಟ (Corporate Agent)  – ವಿಮಾ ಸಂಸ್ಥೆಯ ಪರವಾಗಿ, ಕಮೀಶನ್ ಆಧಾರದ ಮೇಲೆ ವಿಮಾಸರಕುಗಳನ್ನು ಗ್ರಾಹಕರಿಗೆ ಮಾರುವ ಸಂಸ್ಥೆಗಳು. ಉದಾ : ಬ್ಯಾಂಕು, ಸೊಸಾಯಿಟಿ, ದಲ್ಲಾಳಿ ಸಂಸ್ಥೆ (ಃಡಿoಞeಡಿ).
3. ಮಧ್ಯವರ್ತಿಗಳು (Intermediaries)  : ಏಜೆಂಟ, ಕಾರ್ಪೋರೇಟ್ ಏಜೆಂಟರೆಲ್ಲರನ್ನೂ ಮಧ್ಯವರ್ತಿಗಳೆಂದು ಕರೆಯುತ್ತಾರೆ.
4. ಆ್ಯಕ್ಚೂರೀಜ್ (Acturies)  : ವಿಮಾ  ಅಪಾಯಗಳ ಅಳತೆ ಮಾಡಿ, ಅವುಗಳಿಗೆ ಸಂಬಂಧಿಸಿದ ವಿಮಾಸರಕುಗಳ ಬೆಲೆಯನ್ನು ನಿರ್ಧರಿಸುವವರು. ವಿಮಾ ಸಂಸ್ಥೆಯ ಒಟ್ಟಾರೆ ಆರ್ಥಿಕ ಜವಾಬ್ದಾರಿಯನ್ನು ಅಳೆದು, ಅದನ್ನು ನಿಭಾಯಿಸಲು ಕಂಪನಿಗೆ ಇರುವ ಆರ್ಥಿಕ ಸಾಮಥ್ರ್ಯವನ್ನು ಕಂಡು ಹಿಡಿಯುವ ಮಹಾ ಮೇಧಾವಿಗಳು. ಪಾಲಿಸಿಗಳಿಗೆ ಘೋಷಿಸಲಾಗುವ ಬೋನಸ್ಸ್ ದರ ನಿರ್ಧರಿಸುವರು. ಕಂಪನಿಯ ಲಾಭ ನಿರ್ಧರಿಸುವವರು.
5. ಅಂಡರ್ ರೈಟರ್ಸ್ (Underwriters)   : ಗ್ರಾಹಕರ ವಿಮಾ ಕೋರಿಕೆಗೆ ನಿರ್ಣಯ ಕೊಡುವವರು. ವ್ಯಕ್ತಿಗತ ಅಪಾಯವನ್ನು ಅಳೆದು, ಅಪಾಯಕ್ಕೆ ವಿಧಿಸಬೇಕಾಗುವ ವಿಮಾ ಶುಲ್ಕವನ್ನು ಹಾಗೂ ಇತರ ಶರ್ಯತ್ತುಗಳನ್ನು ನಿರ್ಧರಿಸುವವರು.
6. ಮೂರನೇ ಪಕ್ಷದ ಆಡಳಿತಗಾರರು (Third Party Administrators)    ; ಆಸ್ಪತ್ರೆಗಳ ಜಾಲಗಳನ್ನು ನಿರ್ಮಿಸಿ, ಆರೋಗ್ಯ ವಿಮಾ ಗ್ರಾಹಕರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ದೊರಕಿಸಲು ಸಹಾಯ ಮಾಡುವವರು. ಈ ಕಾರ್ಯಕ್ಕಾಗಿ ವಿಮಾ ಸಂಸ್ಥೆಗಳಿಂದ ಕಮೀಶನ್ ಪಡೆಯುವವರು.
7. ಹಾನಿ ಹೊಂದಾಣಿಕೆದಾರರು/ಸರ್ವೇಯರ್‍ಗಳು (Loss Adjusters/Surveyors)  : ಸಾಮಾನ್ಯ ವಿಮೆಯಲ್ಲಿ ಅಪಾಯ ಘಟನೆ ಜರುಗಿದಾಗ, ಸಂಭವಿಸಿದ ಹಾನಿ ಪ್ರಮಾಣವನ್ನು ಅಳೆದು ಸಂಸ್ಥೆಗೆ ವರದಿ ನೀಡುವವರು. ಈ ಕಾರ್ಯಕ್ಕಾಗಿ ವಿಮಾ ಸಂಸ್ಥೆಗಳಿಂದ ಶುಲ್ಕ ಪಡೆಯುವವರು.
8. ನಿಯಂತ್ರಕ (Regulator)  : ವಿಮಾ ಉದ್ದಿಮೆಯ ಹಿತಾಸಕ್ತಿ ಕಾಪಾಡಲು, ವಿಮಾ ಸಂಸ್ಥೆಗಳ/ಮಾರಾಟಗಾರರ ಕಾರ್ಯ ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಲು ಸರಕಾರದಿಂದ ನೇಮಕಗೊಂಡ ಅಧಿಕಾರೀ ಸಂಸ್ಥೆ. ಭಾರತದಲ್ಲಿ ಆಯ್.ಆರ್.ಡಿ.ಏ.ಯು ವಿಮಾ ಉದ್ದಿಮೆಯ ನಿಯಂತ್ರಕನಾಗಿರುತ್ತದೆ.
9. ತರಬೇತಿ ಸಂಸ್ಥೆಗಳು(Training Institutes): ವಿಮಾ ಉದ್ದಿಮೆಗೆ ಅವಶ್ಯವಿರುವ ಕಾರ್ಯಕುಶಲತೆಯನ್ನು ಪಡೆಯಲು ವಿಮಾ ಸಂಸ್ಥೆಯಲ್ಲಿ ಕೆಲಸಮಾಡುವವರಿಗೆ ತರಬೇತಿ ನೀಡುವ ಸಂಸ್ಥೆಗಳು. ಉದಾ : ಇನ್‍ಶ್ಯೂರೆನ್ಸ್ ಇನ್‍ಸ್ಟೀಟ್ಯೂಟ್ ಆಫ ಇಂಡಿಯಾ ( ಆಯ್.ಆಯ್.ಆಯ್.), ನ್ಯಾಶನಲ್ ಇನ್‍ಶ್ಯೂರೆನ್ಸ್ ಅಕ್ಯಾಡಮಿ.
10. ಎನ್.ಜಿ.ಒ.ಗಳು (NGOs) : ಸೂಕ್ಷ್ಮವಿಮೆ ಮಾರಾಟ ಮಾಡಲು ತಯಾರಾದ ಸ್ವ ಸಹಾಯ ಗುಂಪುಗಳು, ಸರಕಾರೇತರ ಸಂಸ್ಥೆಗಳು.

Saturday, May 3, 2014

3 ಮೇ 2014 


ಪುನರ್ವಿಮಾ ಸಂಸ್ಥೆ (Re Insurance Company)   ಗಳ ಪಾತ್ರಗಳು : 



ವ್ಯಕ್ತಿಗತ ಗ್ರಾಹಕರು ವರ್ಗಾಯಿಸಿದ ಮಹಾನ್ ಅಪಾಯ ರಕ್ಷಣೆಯ ಜವಾಬ್ದಾರಿ ತನ್ನ ಸಾಮಥ್ರ್ಯಕ್ಕೆ ಮೀರಿದಾಗ, ಮೂಲ ವಿಮಾಸಂಸ್ಥೆಯು ತನ್ನ ಸಾಮಥ್ರ್ಯಕ್ಕೆ ಮೀರಿ, ಹೆಚ್ಚೆನಿಸಿದ ಅಪಾಯದ ಭಾಗವನ್ನು ಎರಡನೆಯ ವಿಮಾಸಂಸ್ಥೆಗೆ ವರ್ಗಾಯಿಸುತ್ತದೆ. ಈ ರೀತಿ ತಾನು ಸ್ವೀಕರಿಸಿದ ಅಪಾಯದ ಜವಾಬ್ದಾರಿಯನ್ನು ಪುನಃ  ಮತ್ತೊಂದು ಕಂಪನಿಗೆ ವರ್ಗಾಯಿಸುವದಕ್ಕೆ ಪುನರ್ವಿಮೆ ಎನ್ನುತ್ತಾರೆ. ಹೆಚ್ಚೆನಿಸಿದ ಅಪಾಯದ ಭಾಗವನ್ನು ಸ್ವೀಕರಿಸಿದ ವಿಮಾಸಂಸ್ಥೆಗೆ ‘ಪುನರ್ವಿಮಾ ಪ್ರದಾನಕ’ (Re Insurer) ಎಂದು ಕರೆಯುತ್ತಾರೆ. ಕೆಲವು ಕಂಪನಿಗಳು ಪುನರ್ವಿಮೆಯ ಜವಾಬ್ದಾರಿ ನಿರ್ವಹಿಸುವ ಕಾರ್ಯಗಳನ್ನು ಮಾತ್ರ ಮಾಡುತ್ತವೆ. ವ್ಯಕ್ತಿಗತ ವಿಮಾ ಕೋರಿಕೆದಾರರು ಅವರ ಗ್ರಾಹಕರಾಗಿರುವದಿಲ್ಲಾ. ಹೆಚ್ಚೆನಿಸಿದ ಅಪಾಯದ ಭಾಗವನ್ನು ವರ್ಗಾಯಿಸುವ ಮೂಲ ವಿಮಾ ಸಂಸ್ಥೆಗಳೇ ಅವುಗಳ ಗ್ರಾಹಕರು.

Friday, May 2, 2014

2 ಮೇ 2014 


ಸಾಮಾನ್ಯ ವಿಮಾ ಸಂಸ್ಥೆ (General  Insurance) ಗಳ ಪಾತ್ರಗಳು :



ಮಾನವ ಜೀವವನ್ನು ಹೊರತು ಪಡಿಸಿ, ಉಳಿದೆಲ್ಲ ಆಸ್ತಿಗಳಿಗೆ ಅಪಾಯ ಸಂಭವಿಸಿದಾಗ ಉಂಟಾಗಬಹುದಾದ  ಆರ್ಥಿಕ ಹಾನಿಯ ವಿರುದ್ಧ ಪರಿಹಾರ ನೀಡುವ ಕಾರ್ಯವನ್ನು  ಸಾಮಾನ್ಯ ವಿಮಾ ಸಂಸ್ಥೆಗಳು ಮಾಡುತ್ತವೆ.
(ಜೀವ ವಿಮೆಯಲ್ಲಿ ಅಪಘಾತ, ಗಂಭೀರ ಕಾಯಿಲೆಗಳ ಅಪಾಯಗಳ ವಿರುದ್ಧ ನೀಡಲಾಗುವ ವಿಮಾ ರಕ್ಷಣೆಗಳು ನಿಜವಾಗಿಯೂ ಸಾಮಾನ್ಯ ವಿಮೆಯ ಪರಿಧಿಯಲ್ಲಿ ಬರುತ್ತವೆ.)

Thursday, May 1, 2014

1 ಮೇ 2014 


ಜೀವ ವಿಮಾ ಸಂಸ್ಥೆ (Life Insurance) ಗಳ ಪಾತ್ರಗಳು :



ಮಾನವ ಜೀವಕ್ಕೆ ಅಪಾಯ ಸಂಭವಿಸಿದಾಗ ಉಂಟಾಗಬಹುದಾದ  ಆರ್ಥಿಕ ಹಾನಿಯ ವಿರುದ್ಧ ಪರಿಹಾರ ನೀಡುವ ಕಾರ್ಯವನ್ನು ಜೀವ ವಿಮಾ ಸಂಸ್ಥೆಗಳು ಮಾಡುತ್ತವೆ. ಆರ್ಥಿಕ ಹಾನಿಯ ದೃಷ್ಟಿಯಿಂದ ಮಾನವ ಜೀವಕ್ಕೆ ತಗಲುವ ಅಪಾಯಗಳು ; 
                   
1) ಗಳಿಕೆಯ ಅವಧಿಯಲ್ಲಿ ಸಂಭವಿಸುವ ಸಾವು, ಅಪಘಾತ, ಗಂಭೀರಕಾಯಿಲೆಗಳು.
 2) ಗಳಿಕೆಯ ಅವಧಿಯ ನಂತರವೂ ಸುದೀರ್ಘ ಕಾಲ ಬದುಕುವಿಕೆ.